ಆನಂದಕುಮಾರಸ್ವಾಮಿ
	(1877 - 1947). ಲೋಕ ಪ್ರಸಿದ್ಧ ಕಲಾವಿಮರ್ಶಕರು. ಭಾರತದ ಹಾಗೂ ಏಷ್ಯಾದ ಕಲೆಯ ಹಿರಿಮೆಯನ್ನು ಜಗತ್ತಿಗೆ ಸಾರಿ ಹೇಳಲು ನಿರಂತರವಾಗಿ ಶ್ರಮಿಸಿದವರು. ತಂದೆ ಸಿಂಹಳೀಯ ಹಿಂದೂ, ತಾಯಿ ಸ್ಕಾಟ್ಲೆಂಡಿನವಳು. ಭೂಗರ್ಭಶಾಸ್ತ್ರವನ್ನು ಕಲಿತು 1906ರಲ್ಲಿ ಸಿಂಹಳದ ಖನಿಜ ಪರಿವೀಕ್ಷಣೆಯ ನಿರ್ದೇಶಕರಾಗಿ ನೇಮಕಗೊಂಡರು. ಒಮ್ಮೆ ಸಿಂಹಳದ ಹಾಳುಬಿದ್ದ ಗುಹೆಗಳ ಕಲಾವೈಭವವನ್ನು ಕಂಡಮೇಲೆ ಅವರ ಬದುಕಿನ ದಾರಿಯೇ ಬೇರೆಯಾಯಿತು. ಕಲಾರಾಧಕರು. ಮೊದಲು ಸಿಂಹಳದ ಕಲೆಯನ್ನೂ ಅನಂತರ ಭಾರತದ ಕಲೆಯನ್ನೂ ಕಡೆಗೆ ಇಡೀ ಏಷ್ಯಾದ ಕಲೆಯನ್ನೂ ಅಭ್ಯಸಿಸಿದರು. ಅನಂತರ ಅಮೆರಿಕಕ್ಕೆ ಹೋಗಿ, ಬಾಸ್ಟನ್ನಿನ ವಸ್ತುಸಂಗ್ರಹಾಲಯದ ಏಷ್ಯನ್ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡರು. ಭಾರತದ ಕಲೆಯನ್ನು ಮಾತ್ರವಲ್ಲದೆ ಪುರಾಣ, ದರ್ಶನ, ಸಾಹಿತ್ಯ, ಶಿಲ್ಪ, ಧರ್ಮ ಮುಂತಾದವನ್ನೆಲ್ಲ ಕೂಲಂಕಷವಾಗಿ ಅಧ್ಯಯನ ಮಾಡಿದರು. ಪಾಶ್ಚಾತ್ಯ ಹಾಗೂ ಪೌರ್ವಾತ್ಯ ಕಲೆಗೆ ಕೇವಲ ವೈಯಕ್ತಿಕ ಪ್ರೇರಣೆಯಿದ್ದರೆ ಪೌರ್ವಾತ್ಯ ಕಲೆಗಳ ಹಿನ್ನೆಲೆ ಬೇರೆಬೇರೆಯೆಂಬುದನ್ನು ಸಿದ್ಧಾಂತ ಮಾಡಿದರು. ಪಾಶ್ಚಾತ್ಯ ಕಲೆಗೆ ವೈಯಕ್ತಿಕ ಪ್ರೇರಣೆಯಿದ್ದರೆ ಪೌರ್ವಾತ್ಯ ಕಲೆಗೆ ಸಮಷ್ಟಿ ಪ್ರೇರಣೆಯುಂಟೆಂದೂ ಅದು ಧಾರ್ಮಿಕ ಸ್ಫೂರ್ತಿಯನ್ನುಳ್ಳದ್ದೆಂದೂ ಅವರ ಪ್ರತಿಪಾದನೆ. ಅವರ ಪ್ರಯತ್ನಗಳ ಫಲವಾಗಿ, ಪೌರ್ವಾತ್ಯ ಕಲೆಯನ್ನು ಕುರಿತ ಅನೇಕ ಪಾಶ್ಚಾತ್ಯ ವಿದ್ವಾಂಸರ ತಪ್ಪು ತಿಳಿವಳಿಕೆ ದೂರವಾಯಿತು.

	ಭಾರತೀಯ ಕಲೆಯ ಬಗೆಗೆ ಆನಂದಕುಮಾರಸ್ವಾಮಿಯವರ ಅಭಿಮಾನ ಅಪಾರವಾದುದು. ಅದರ ಮಹತ್ವವನ್ನು ಪ್ರಕಟಿಸುವ ಕಾರ್ಯಕ್ಕೆ ಅವರು ತಮ್ಮ ಜೀವಮಾನದ ಬಹುಭಾಗವನ್ನು ವಿನಿಯೋಗಿಸಿದರು. ಭಾರತೀಯ ಕಲೆಯ ವಿಷಯದಲ್ಲಿ ಅವರು ಪ್ರಮಾಣವೆಂದು ಎಲ್ಲೆಡೆಯೂ ಅಂಗೀಕರಿಸಲ್ಪಟ್ಟರು. ಭಾರತೀಯರು ಭಾರತೀಯರಾಗಿಯೇ ಉಳಿದು ತಮ್ಮ ವೈಶಿಷ್ಟ್ಯವನ್ನು ಕಾಪಾಡಿಕೊಳ್ಳಬೇಕೆಂದೂ ವಿದೇಶೀಯ ಕಲೆ ಸಂಸ್ಕøತಿಗಳಿಗೆ ಮಾರುಹೋಗಬಾರದೆಂದೂ ಅವರ ಸಂದೇಶ.

	ಆನಂದ ಕುಮಾರಸ್ವಾಮಿಯವರು ವಿಪುಲ ಸಂಖ್ಯೆಯಲ್ಲಿ ಗ್ರಂಥಗಳನ್ನೂ ಲೇಖನಗಳನ್ನೂ ಬರೆದಿದ್ದಾರೆ. ಶಿವತಾಂಡವ, ಸಿಂಹಳೀ ಕಲೆ, ಭಾರತದ ಮತ್ತು ಇಂಡೋನೇಷ್ಯಾದ ಕಲೆಯ ಇತಿಹಾಸ, ಪೂರ್ವ ಏಷ್ಯಾದ ಕಲಾ ಪರಿಚಯ, ಬುದ್ಧ ಮತ್ತು ಬೌದ್ಧ ಮತ, ಹಿಂದೂ ಧರ್ಮ ಮತ್ತು ಬೌದ್ಧ ದಂತ ಕಥೆಗಳು-ಇವು ಅವರ ಕೆಲವು ಕೃತಿಗಳ ವಸ್ತುಗಳು. ಡಾನ್ಸ್ ಆಫ್ ಶಿವ ಎಂಬ ಗ್ರಂಥ ಅತ್ಯಂತ ವಿಖ್ಯಾತವಾದುದು. ಭಾರತೀಯ ಕಲೆಯ ಹೃದಯವನ್ನೇ ತೆರೆದು ತೋರುವ ಪುಸ್ತಕವಿದು.

(ಸಿ.ಪಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ